ಕ್ಯಾಂಟರ್‍ಬೆರಿ

ಇಂಗ್ಲೆಂಡಿನ ಕೆಂಟ್ ಕೌಂಟಿಯ ಒಂದು ನಗರ. ಕೆಂಟ್‍ನ ಪೌರಸಂಸ್ಥೆ ಇರುವ ಊರು (ಬರೊ) ಎಂಬುದರಿಂದಾಗಿ ಇದಕ್ಕೆ ಕ್ಯಾಂಟರ್‍ಬೆರಿ ಎಂಬ ಹೆಸರು ಬಂತು. ಇದು ಒಂದು ಕ್ರೈಸ್ತ ಕ್ಷೇತ್ರ. ಜನಸಂಖ್ಯೆ 27,800. ಲಂಡನ್ನಿನ ಆಗ್ನೇಯಕ್ಕೆ 55 ಮೈ. ಮತ್ತು ಡೋವರ್‍ನಿಂದ 15 ಮೈ. ದೂರದಲ್ಲಿದೆ. ಕ್ರಿ.ಪೂ.200ರ ವೇಳೆಗಾಗಲೆ ಇಲ್ಲಿ ಜನವಸತಿ ಇತ್ತು. ಕಿರಿ ಕಣಿವೆಯಲ್ಲಿ ಹರಿಯುವ ಸ್ಟಾರ್ ನದಿ ಈ ಎಡೆಯಲ್ಲಿ ಮೈದಾನ ಪ್ರವೇಶ ಮಾಡುತ್ತದೆ. ಕ್ರಿ.ಶ.43ರಲ್ಲಿ ರೋಮನರು ಇದನ್ನು ಆಕ್ರಮಿಸಿಕೊಂಡ ಮೇಲೆ ಇದೊಂದು ಸೇನಾ ನೆಲೆಯಾಯಿತು; ಇಲ್ಲಿ ಕೋಟೆಯ ನಿರ್ಮಾಣವೂ ಆಯಿತು. ರೋಮನರು ಇಲ್ಲೊಂದು ನಾಟ್ಯಮಂದಿರವನ್ನು ನಿರ್ಮಿಸಿದರು. ಬ್ರಿಟನಿನ ರೋಮನ್ ನಾಟ್ಯಮಂದಿರಗಳಲ್ಲೆಲ್ಲ ಇದು ಅತ್ಯಂತ ದೊಡ್ಡದು. ಈ ಕಟ್ಟಡದ ಮತ್ತು ಕ್ರಿ.ಶ.200ರಲ್ಲಿ ರೋಮನರು ಕಟ್ಟಿದ ಕೋಟೆಯ ಗೋಡೆಗಳ ಕುರುಹುಗಳು ಈಗಲೂ ಉಳಿದಿವೆ.

	6ನೆಯ ಶತಮಾನದ ಕೊನೆಯ ವೇಳೆಗೆ ಇದು ಕೆಂಟಿನ ದೊರೆ ಎತೆಲ್‍ಬರ್ಟನ ರಾಜಧಾನಿಯಾಗಿತ್ತು. ಎತೆಲ್ ಬರ್ಟನ ರಾಣಿ ಬರ್ತಾ ಕ್ರೈಸ್ತಳಾಗಿದ್ದುದರಿಂದ ಕ್ರೈಸ್ತ ಸಂನ್ಯಾಸಿಗಳಿಗೆ ಈಕೆ ವಿಶೇಷ ಪ್ರೋತ್ಸಾಹ ನೀಡಿದಳು. ಇಂಗ್ಲಿಷರನ್ನು ಕ್ರೈಸ್ತಮತಕ್ಕೆ ಪರಿವರ್ತಿಸುವ ಉದ್ದೇಶದಿಂದ 597ರಲ್ಲಿ ರೋಮಿನಿಂದ ಸೇಂಟ್ ಆಗಸ್ಟೀನ್ ಇಲ್ಲಿಗೆ ಬಂದ. ಆಗ, ಅಥವಾ ಸ್ವಲ್ಪ ಕಾಲಾನಂತರ, ಆಗಸ್ಟೀನ್ ಅಬೆಯ ನಿರ್ಮಾಣವಾಯಿತು. ಆಮೇಲೆ ಕಟ್ಟಲಾದ ಕ್ರೈಸ್ತಚರ್ಚು ಮುಂದೆ ಕ್ಯಾಂಟರ್‍ಬೆರಿಯ ಆರ್ಚ್‍ಬಿಷಪರ ಆರಾಧನಮಂದಿರವಾಯಿತು.

	ಕ್ಯಾಂಟರ್‍ಬೆರಿಯ ಅನಂತರದ ಚರಿತ್ರೆಯೆಲ್ಲ ಚರ್ಚಿನ ಇತಿಹಾಸದೊಂದಿಗೆ ಕೂಡಿಕೊಂಡಿದೆ. ಕ್ಯಾಂಟರ್‍ಬೆರಿಯ ಆರ್ಚ್‍ಬಿಷಪ್ ಆಗಿದ್ದ ಥಾಮಸ್ ಬೆಕೆಟ್ (1118-1170) ಇಲ್ಲಿಯೇ ಕೊಲೆಯಾದ. ಅವನ ಮಂದಿರವೇ ಇಂಗ್ಲೆಂಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾಯಿತು. ಇಂಗ್ಲೆಂಡು ಮೇರಿಯ ಆಳ್ವಿಕೆಗೆ ಒಳಪಟ್ಟಿದ್ದ ಕಾಲದಲ್ಲಿ ಕ್ಯಾಂಟರ್‍ಬೆರಿಯಲ್ಲಿ ಅನೇಕ ಮಂದಿ ಪ್ರಾಟೆಸ್ಟಂಟರನ್ನು ಸಜೀವವಾಗಿ ಸುಡಲಾಯಿತು. 

	ಕ್ಯಾಂಟರ್‍ಬೆರಿಯಲ್ಲಿ ಅನೇಕ ಶಾಲಾಕಾಲೇಜುಗಳಿವೆ. ಅವುಗಳಲ್ಲಿ ಪ್ರಸಿದ್ಧವಾದ್ದು ಕಿಂಗ್ಸ್ ಸ್ಕೂಲ್. 1970ರಲ್ಲಿ ಇಲ್ಲಿ ಕೆಂಟ್ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. 

	ಲ್ಯಾನ್‍ಫ್ರಾಂಕ್ 1070ರಲ್ಲಿ ಕ್ಯಾಂಟರ್‍ಬೆರಿಯ ಆರ್ಚ್‍ಬಿಷಪ್ ಆದಮೇಲೆ ಇಲ್ಲಿಯ ಹಳೆಯ ಸ್ಯಾಕ್ಸನ್ ಆರಾಧನಮಂದಿರವನ್ನು ಸಂಪೂರ್ಣವಾಗಿ ಪುನರ್ನಿರ್ಮಿಸಲಾಯಿತು. 1170-1184ರಲ್ಲಿ ಕಟ್ಟಲಾದ ಪ್ರವಚನ ಮಂಟಪ (ಕ್ವೈರ್) ಇಂಗ್ಲೆಂಡಿನ ಗಾಥಿಕ್ ವಾಸ್ತುಶಿಲ್ಪದ ಅತ್ಯಂತ ಹಳೆಯ ಮಾದರಿ. ಮಠೀಯ ಆರಾಧನಮಂದಿರವನ್ನು ಭವ್ಯವಾದ ರೀತಿಯಲ್ಲಿ ಪುನರ್ನಿರ್ಮಿಸಿದ್ದು 14ನೆಯ ಶತಮಾನದಲ್ಲಿ. ಬೆಕೆಟನ ಗೋರಿ 1538ರಲ್ಲಿ ರೆಫರ್ಮೇಷನ್ ಕಾಲದಲ್ಲಿ ನಾಶವಾಯಿತು. ಉಳಿದಿರುವ ಗೋರಿಗಳಲ್ಲಿ ಬ್ಲ್ಯಾಕ್ ಪ್ರಿನ್ಸನದು ಒಳ್ಳೆಯ ಸ್ಥಿತಿಯಲ್ಲಿದೆ. ನಗರದ ಉತ್ತರ ಭಾಗದಲ್ಲಿ ಅನೇಕ ಕ್ರೈಸ್ತಮಠಗಳ ಅವಶೇಷಗಳುಂಟು. 					  							(ಜಿ.ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ